ಮಹಿಳೆ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ.

ಚನ್ನರಾಯಪಟ್ಟಣ: ಹಗಲಿನ ಸಮಯದಲ್ಲೇ ಮನೆಗೆ ನುಗ್ಗಿ ಮಹಿಳೆಯನ್ನು ಹೆದರಿಸಿ, 30 ಗ್ರಾಂ ಚಿನ್ನದ ಸರ ಮತ್ತು ₹2.10 ಲಕ್ಷ ದೋಚಿರುವ ಘಟನೆ ಹೋಬಳಿ ಮಾಚಬೂನಹಳ್ಳಿಯಲ್ಲಿ (ಕಾವಲ ಬಾರೆ) ಸೋಮವಾರ ನಡೆದಿದೆ.
ಗ್ರಾಮದ ಯಶವಂತ ಅವರ ಪತ್ನಿ ಸ್ಪಂದನ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಮನೆಯಲ್ಲಿ ಇದ್ದಾಗ, ಇಬ್ಬರು ಅಪರಿಚಿತರು ಗೊತ್ತಾಗದ ಹಾಗೆ ಮನೆಯೊಳಗೆ ಪ್ರವೇಶ ಮಾಡಿದ್ದಾರೆ.
ಕೋಣೆಯಲ್ಲಿ ಶಬ್ದವಾಗಿದೆ, ಮೈದುನ ಸುಮಂತ್ ಬಂದಿರಬಹುದು ಎಂದು ಅವರು ಮನೆ ಕೆಲಸದಲ್ಲಿ ತೊಡಗಿದ್ದಾರೆ. ಕಬ್ಬಿಣದ ಬೀರನ್ನು ತೆಗೆಯುವ ಶಬ್ದ ಕೇಳಿ, ಅನುಮಾನಗೊಂಡು ಕೋಣೆಗೆ ಹೋಗಿದ್ದಾರೆ. ಕಳ್ಳನೊಬ್ಬ ಇವರನ್ನು ಹಿಡಿದು, ಬಾಯಿ ಮುಚ್ಚಿಕೊಂಡು ಕತ್ತಿನಲ್ಲಿ ಇದ್ದ 30 ಗ್ರಾಂ ಮಾಂಗಲ್ಯ ಸರವನ್ನು ಕಿತ್ತುಕೊಂಡಿದ್ದಾನೆ. ಮೈದುನ ಕೋಣೆಯಲ್ಲಿ ಇದ್ದ ₹1.40 ಲಕ್ಷ ಮತ್ತು ಇನ್ನೊಂದು ಕೊಠಡಿಯಲ್ಲಿ ಇಟ್ಟಿದ್ದ ₹70 ಸಾವಿರ ಸೇರಿ ಒಟ್ಟು ಎರಡು ಲಕ್ಷದ ಹತ್ತು ಸಾವಿರ ಹಣ ದೋಚಿದ್ದಾರೆ. ಮಹಿಳೆ ಮೇಲೆ ದುಷ್ಕರ್ಮಿಗಳು ಹಲ್ಲೆ ಸಹ ನಡೆಸಿದ್ದಾರೆ.
ಈ ಬಗ್ಗೆ ಹಿರೀಸಾವೆ ಠಾಣೆಗೆ ಮಹಿಳೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಮತ್ತು ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಗ್ರಾಮದಲ್ಲಿ ಕಳೆದ ಒಂದು ವಾರದಲ್ಲಿ ಇದು ಎರಡನೇ ಪ್ರಕರಣವಾಗಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.