ಧಾರವಾಡ ಪಟಾಕಿ ಗೋದಾಮಿಗೆ ಪೊಲೀಸರ ಭೇಟಿ-ಸುರಕ್ಷತಾ ಕ್ರಮಗಳ ಪರಿಶೀಲನೆ.

ಧಾರವಾಡ: ಆನೇಕಲ್ ಪಟ್ಟಣದ ಅತ್ತಿಬೆಲೆಯ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ದುರಂತದ ನಂತರ ರಾಜ್ಯ ಸರ್ಕಾರ ಪಟಾಕಿ ಗೋದಾಮುಗಳ ಬಗ್ಗೆ ತೀವ್ರ ನಿಗಾ ವಹಿಸುವುದರ ಜೊತೆಗೆ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಲು ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳದವರು ಹಾಗೂ ತಾಲೂಕು ಆಡಳಿತದವರು ಧಾರವಾಡದ ಎಲ್ಲೆಲ್ಲಿ ಪಟಾಕಿ ಗೋದಾಮುಗಳಿವೆಯೋ ಅಲ್ಲೆಲ್ಲ ತೆರಳಿ ಅಲ್ಲಿನ ಸುರಕ್ಷತಾ ಕ್ರಮಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ಧಾರವಾಡದ ಅತ್ತಿಕೊಳ್ಳದ ಬಳಿ ಇರುವ ದೀಪಕ ಅಳಗವಾಡಿ ಎಂಬುವವರಿಗೆ ಸೇರಿದ ಪಟಾಕಿ ಗೋದಾಮಿಗೆ ಬುಧವಾರ ತಹಶೀಲ್ದಾರ ಡಿ.ಎಚ್. ಹೂಗಾರ, ಎಸಿಪಿ ಪ್ರಶಾಂತ ಸಿದ್ಧನಗೌಡರ, ವಿದ್ಯಾಗಿರಿ ಠಾಣೆ ಇನ್‌ಸ್ಪೆಕ್ಟರ್ ಸಂಗಮೇಶ ದಿಡ್ಡಿಗನಾಳ, ಅಗ್ನಿಶಾಮಕ ದಳದ ಅಮೃತ ಅವರು ಭೇಟಿ ನೀಡಿ ಅಲ್ಲಿನ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಈ ಗೋದಾಮುಗಳು ಅಧಿಕೃತವಾಗಿದ್ದು, ಅಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಅಧಿಕಾರಿಗಳು ಗೋದಾಮಿನ ಮಾಲೀಕರಿಗೆ ಸೂಚನೆ ಕೊಟ್ಟಿದ್ದಾರೆ.
ಧಾರವಾಡದ ಎಲ್ಲೆಲ್ಲಿ ಈ ರೀತಿಯ ಪಟಾಕಿ ಗೋದಾಮುಗಳಿವೆಯೋ ಅಲ್ಲಿಗೆಲ್ಲ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.