Ksrtc ಬಸ್ ಪಲ್ಟಿ, ನಾಲ್ವರಿಗೆ ಗಂಭೀರ ಗಾಯ.

ಕುಷ್ಟಗಿ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಡಿಪೋಗೆ ಸೇರಿರುವ ಸಾರಿಗೆ ಬಸ್ವೊಂದು ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಯ್ಯಾಪೂರ ಬಳಿ ಪಲ್ಟಿಯಾಗಿ ಪ್ರಯಾಣಿಕರು ತೀವ್ರ ಗಾಯಗೊಂಡಿರುವ ಘಟನೆ ಭಾನುವಾರ ಸಂಜೆ ನಡೆದಿದೆ.
ಕುಷ್ಟಗಿ ತಾಲೂಕಿನ ದೋಟಿಹಾಳದಿಂದ ದಕ್ಷಿಣ ಕನ್ನಡ ಮಂಗಳೂರು ಮಾರ್ಗದಲ್ಲಿ ಸಂಚರಿಸುವ KA 57 F 4537 ಬಸ್ ಪಲ್ಟಿಯಾಗಿದೆ. ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ.
ದೋಟಿಹಾಳದಿಂದ ಮೆಣಸಗೇರಿ, ಮಿಯ್ಯಾಪೂರ ಮೂಲಕ ಹನುಮಸಾಗರ ಕಡೆ ಹೊರಟಿದ್ದ ಬಸ್ ಮಿಯ್ಯಾಪೂರ ಹಳ್ಳದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ರಸ್ತೆ ಬದಿ ವಾಲಿ ಬಿದ್ದಿದೆ. ಚಾಲಕ ಹಾಗೂ ನಿರ್ವಾಹಕ ಸೇರಿದಂತೆ ಬಸ್ಸಿನಲ್ಲಿ ಪ್ರಯಾಣಿಸುತಿದ್ದ ಸುಮಾರು 35 ಜನರಲ್ಲಿ ಹಲವರಿಗೆ ಗಾಯಗಳಾಗಿವೆ. ಅಪಘಾತದ ಸ್ಥಳಕ್ಕೆ ಕುಷ್ಟಗಿ ಹಾಗೂ ಹನುಮಸಾಗರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾರಿಗೂ ಜೀವಹಾನಿ ಸಂಭವಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಗಾಯಾಳುಗಳನ್ನು ಕುಷ್ಟಗಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನೂ ಕೆಲ ಗಾಯಾಳುಗಳಿಗೆ ಇಳಕಲ್, ಹನುಮಸಾಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.