ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ಇನ್ಮುಂದೆ ವಿಶೇಷ ಠಾಣೆಯ ಅಧಿಕಾರ & ಆರೋಪಿಗಳನ್ನು ಬಂದಿಸುವ ಅಧಿಕಾರ.

ಬೆಂಗಳೂರು: ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ 33 ಘಟಕಗಳನ್ನು ವಿಶೇಷ ಪೋಲಿಸ್ ಠಾಣೆಗಳೆಂದು ಘೋಷಿಸಲು ಹಾಗೂ ಸದರಿ ಠಾಣೆಗಳ ನಿರ್ವಹಣೆಗಾಗಿ ಅಗತ್ಯವಿರುವ 450 ವಿವಿಧ ಹುದ್ದೆಗಳಿಗೆ ಮಂಜೂರಾತಿ ನೀಡಿ ಸರ್ಕಾರ ಅದೇಶ ಮಾಡಿದೆ.
ಇನ್ಮುಂದೆ ಡಿಸಿಆರ್‌ಇ ಘಟಕದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮತ್ತು ಮೇಲ್ಪಟ್ಟ ಅಧಿಕಾರಿಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಅಧಿನಿಯಮ, 1989 ರನ್ವಯ ದಾಖಲಾಗುವ ಪ್ರಕರಣಗಳನ್ನು ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುವ ಅಧಿಕಾರವನ್ನು ನೀಡಲಾಗಿದೆ.
ಕರ್ನಾಟಕ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ ಮೀಸಲಾತಿ), ನಿಯಮ-7 ರಡಿಯಲ್ಲಿ ಡಿಸಿಆರ್‌ಇ ಘಟಕವು ಸುಳ್ಳು ಜಾತಿ ಪ್ರಮಾಣ ಪತ್ರಗಳ ಪ್ರಕರಣಗಳಲ್ಲಿ ತನಿಖೆಯನ್ನು ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗುತಿತ್ತು. ಆದರೆ ಈಗ ಇದರಲ್ಲಿ ಹೊಸ ಹೆಜ್ಜೆಯನ್ನು ರಾಜ್ಯ ಸರಕಾರ ಇಟ್ಟಂತಾಗಿದೆ.
ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಘಟಕಗಳಿಗೆ ಪ್ರಸ್ತುತ ಪೊಲೀಸ್ ಠಾಣೆಯ ಸ್ಥಾನಮಾನವಿಲ್ಲದೇ ಇರುವುದರಿಂದ, ಎಫ್‌ಐಆರ್ ದಾಖಲು ಮಾಡಿ ತನಿಖೆ ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ 1989 ರಡಿ ಪ್ರಸ್ತುತ ಸ್ಥಳೀಯ ಪೊಲೀಸ್ ಠಾಣೆಯಿಂದಲೇ ದೌರ್ಜನ್ಮ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವ ಅಧಿಕಾರವನ್ನು ನೀಡಿದೆ.
ಹೀಗಾಗಿ, ಪ್ರತಿ ಜಿಲ್ಲೆಗೆ ಒಂದರಂತೆ ಹಾಗೂ ಬೆಂಗಳೂರು ನಗರಕ್ಕೆ 02 ರಂತೆ ರಾಜ್ಯದಲ್ಲಿ ಒಟ್ಟು 33 ಡಿಸಿಆರ್‌ಇ ವಿಶೇಷ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ಮತ್ತು ಸದರಿ 33 ವಿಶೇಷ ಪೊಲೀಸ್ ಠಾಣೆಗಳ ನಿರ್ವಹಣೆಗಾಗಿ ಡಿಸಿಆರ್‌ಇ ಘಟಕದಲ್ಲಿ ಹಾಲಿ ಇರುವ 340 ಹುದ್ದೆಗಳ ಜೊತೆಗೆ ಹೆಚ್ಚುವರಿಯಾಗಿ ಈ ಕೆಳಕಂಡ 450 ವಿವಿಧ ವೃಂದದ ಹುದ್ದೆಗಳನ್ನು ಮಂಜೂರು ಮಾಡುವಂತೆ ಪೊಲೀಸ್ ಮಹಾನಿರ್ದೇಶಕರು, ಡಿಸಿಆರ್‌ಇ ಇವರು ಪ್ರಸ್ತಾವನೆ ಸಲ್ಲಿಸಿರುತ್ತಾರೆ. ದಿ: 20-06-2024 ರಂದು ನಡೆದ ಸಚಿವ ಸಂಪುಟ ಸಭೆಯ ಮುಂದೆ ಸಲ್ಲಿಸಲಾಗಿರುತ್ತದೆ. ಸಚಿವ ಸಂಪುಟವು ತಾತ್ವಿಕ ಅನುಮೋದನೆ ನೀಡಿರುತ್ತದೆ.
