ವಿವಾದಾತ್ಮಕ ಮತಾಂತರ ನಿಷೇಧ ಕಾಯ್ದೆ ರದ್ಧತಿಗೆ ಕಾಂಗ್ರೆಸ್ ಸರ್ಕಾರದ ನೂತನ ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ವಿವಾದಾತ್ಮಕ ಮತಾಂತರ ನಿಷೇಧ ಕಾಯ್ದೆ ರದ್ಧತಿಗೆ ನೂತನ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರ ಮಂಡಿಸಿದ ವಿವಾದಾತ್ಮಕ ಮತಾಂತರ ನಿಷೇದ ಕಾಯ್ದೆ ರದ್ದುಗೊಳಿಸಲು ನಿರ್ಧರಿಸಿದ್ದಾರೆ. ಹಾಗಾಗಿ ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಹೊಸ ಮಸೂದೆ ಕಾಯ್ದೆ ಮಂಡನೆಯಾಗಲಿದೆ ಎಂದು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ.
ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರವು ವಿವಾದಾತ್ಮಕ ಮತಾಂತರ ಕಾಯ್ದೆ ವಿರೋಧಿ ಮಸೂದೆಯನ್ನು ಸುಗ್ರೀವಾಜ್ಞೆ ಅಥವಾ ಕಾರ್ಯಕಾರಿ ಆದೇಶದ ಮೂಲಕ ಗುರುವಾರ ಅಂಗೀಕರಿಸಿದೆ. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ರಕ್ಷಣೆ ಸುಗ್ರೀವಾಜ್ಞೆಯನ್ನು 2022ರ ಮೇ ತಿಂಗಳಿನಲ್ಲಿ ಜಾರಿಗೊಳಿಸಿದ್ದರು.
ಮಸೂದೆಯನ್ನು ಆರಂಭದಲ್ಲಿ 2021ರ ಡಿಸೆಂಬರ್ 23 ರಂದು ವಿಧಾನ ಸಭೆಯಲ್ಲಿ ಅಂಗೀಕರಿಸಲಾಗಿತ್ತು. ಆದರೆ ವಿಧಾನ ಪರಿಷತ್‌ನಲ್ಲಿ ಬಿಜೆಪಿಗೆ ಸಂಖ್ಯಾಬಲದ ಕೊರತೆ ಎದುರಾಗಿದ್ದರಿಂದ ಅದನ್ನು ಮಂಡಿಸಿರಲಿಲ್ಲ.
ಆಗ ಪ್ರಸ್ತಾವಿತ ಕಾನೂನನ್ನು ತೀವ್ರವಾಗಿ ವಿರೋಧಿಸಿದ್ದ ಕಾಂಗ್ರೆಸ್, ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ತನ್ನ ನಂಬಿಕೆಯನ್ನು ಆಚರಿಸಲು, ಬೋಧಿಸಲು ಮತ್ತು ಪ್ರಚಾರ ಮಾಡಲು ಸ್ವಾತಂತ್ರ್ಯವನ್ನು ನೀಡುತ್ತದೆ. ಧಾರ್ಮಿಕ ಮತಾಂತರವನ್ನು ನಿಷೇಧಿಸುವ ಯಾವುದೇ ಕಾನೂನು ಸಂವಿಧಾನವನ್ನು ಉಲ್ಲಂಘಿಸುತ್ತದೆ, ಎಂದು ಹೇಳಿತ್ತು. ಅಲ್ಲದೇ ನಾವು ಅಧಿಕಾರಕ್ಕೆ ಬಂದ ಒಂದೇ ವಾರದೊಳಗೆ ಈ ಕಾಯ್ದೆ ರದ್ದುಪಡಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು.